ಕಾಶ್ಮೀರ ವಾಯುವ್ಯದಲ್ಲಿರುವ ಒಂದು ನಗರ. ಇದೇ ಹೆಸರಿನ ನದಿಯೊಂದಿದೆ. ಅದರ ದಕ್ಷಿಣಕ್ಕಿರುವ ವಜ಼ಾರತ್ಗೂ ಈ ಹೆಸರಿದೆ. ಗುಪಿಸ್, ಪುನ್ಯಾಲ್, ಅಷ್ಕುಮಾನ್, ಯಾಸಿನ್ ರಾಜಕೀಯ ಜಿಲ್ಲೆಗಳು, ಗಿಲ್ಗಿಟ್ ಆಸ್ಟರ್ನ ಉಪವಿಭಾಗಗಳು, ಹುನ್ಜ಼ ಮತ್ತು ನಗರ್ ಸಂಸ್ಥಾನಗಳು ಜಿಲಾಸ್ ಉಪ ಏಜೆನ್ಸಿ-ಇವನ್ನೆಲ್ಲ ಒಳಗೊಂಡ ಎಜೆನ್ಸಿಗೂ ಗಿಲ್ಗಿಟ್ ಎಂದೇ ಹೆಸರು. ಚಿತ್ರಾಲ್, ಆಫ್ಘಾನಿಸ್ತಾನ್, ಸೋವಿಯತ್ ದೇಶ ಮತ್ತು ಸಿಂಕಿಯಾಂಗ್(ಚೀನ)ವರೆಗೆ ಈ ಪ್ರದೇಶ ವ್ಯಾಪಿಸಿದೆ. 1947 ರಿಂದ ಈ ಪ್ರದೇಶ ಪಾಕಿಸ್ತಾನದ ಆಕ್ರಮಣಕ್ಕೊಳಗಾಗಿ ಅದರ ಹತೋಟಿಯಲ್ಲಿದೆ. ಆದರೆ ನ್ಯಾಯವಾಗಿ ಇದು ಭಾರತದ ಭಾಗ.

ಭೌತಲಕ್ಷಣಗಳು

ಇದು ಪರ್ವತ ಪ್ರದೇಶ. ಹಿಂದೂಕುಷ್ ಮತ್ತು ಕಾರಕೋರಮ್ ಪರ್ವತಗಳು ಸಂಧಿಸುವ ಸ್ಥಳಕ್ಕೆ ಸಮೀಪದಲ್ಲಿದೆ; ನಗರ್ ಪ್ರದೇಶದ ನೀರ್ಗಲ್ಲ ನದಿಗಳು ಈಶಾನ್ಯದ ಮಜ಼್-ತಾಗ್-ಆಟ ಪರ್ವತಶ್ರೇಣಿಗಳ ಮತ್ತು ನೈಋತ್ಯದ ಕಾಶ್ಮೀರದ ಗಡಿ ಶಿಖರಗಳ ನಡುವೆ ಹರಿದು ಒಟ್ಟಾಗಿ, ಹುನ್ಜ಼ ಕಣಿವೆಯಿಂದ ಗಾಡ್ವಿನ್ ಆಸ್ಟೆನ್ ಶಿಖರದ ಬುಡಕ್ಕೆ ಧಾರಾಕಾರವಾಗಿ ಇಳಿಯುತ್ತವೆ. ತಲೆಯಿಂದ ಕೊನೆಯವರೆಗೆ ನೀರ್ಗಲ್ಲ ನದೀಪಾತ್ರದ ಉದ್ದ 144 ಕಿಮೀ ಇದನ್ನು ಬೈಯಾಪೋ ಎಂದು ಕರೆಯುತ್ತಾರೆ. ಹುನಜ಼ ಮತ್ತು ನಗರ್ ಪರ್ವತ ಪ್ರದೇಶದ ಉದ್ದಕ್ಕೂ ಕಣಿವೆಗಳು ಸುಮಾರು 5250 ಮೀಟರ್ಗಳಿಗೆ ಕಡಿಮೆ ಇಲ್ಲದ ಮತ್ತು ಸರಾಸರಿ 7000 ಮೀಟರ್ ಎತ್ತರವುಳ್ಳ ಪರ್ವತಶ್ರೇಣಿಗಳ ನಡುವೆ ಆಳವಾಗಿ ಹಬ್ಬಿವೆ. ಇಲ್ಲಿ ಸಾಮಾನ್ಯವಾಗಿ ಯಾವ ಸಸ್ಯವೂ ಇಲ್ಲ.

ಇದುವರೆಗೆ ತಿಳಿದಿರುವಂತೆ ಈ ಪ್ರದೇಶದ ಒಂದು ಅತ್ಯಂತ ಪ್ರಾಚೀನ ಮಾರ್ಗವೆಂದರೆ ಗಿಲ್ಗಿಟ್ಗೂ ಚಿತ್ರಾಲ್ ಕಣಿವೆಯ ಮಸ್ತೂಜಿಗೂ ಸಂಬಂಧ ಕಲ್ಪಿಸುವ ಹಾದಿ. ಇದು ಈಗ ಚಿತ್ರಾಲ್- ಗಿಲ್ಗಿಟ್ ಹೆದ್ದಾರಿಯಾಗಿದೆ. ಗಿಲ್ಗಿಟ್ ನದಿಯ ಉತ್ತರದ ಒಂದೊಂದು ಕವಲಿನ ಕೊನೆಗೂ ಒಂದೊಂದು ಅಥವಾ ಹಲವಾರು ಕಣಿವೆ ದಾರಿಗಳಿವೆ. ಇವೆಲ್ಲ ಪಾಮಿರ್ ಪ್ರದೇಶವನ್ನೊ ಪಾಮಿರ್ ಹಾದಿಯ ಉಗಮ ಸ್ಥಳವಾದ ಮೇಲಣ ಯಾರ್ಬುಂ ಕಣಿವೆಯನ್ನೂ ಕೂಡಿಕೊಳ್ಳುತ್ತವೆ. ಯಾಸಿನ್ ಕಣಿವೆಯಲ್ಲಿರುವ ದಾರ್ಕೋಟ್ ಕಣಿವೆ ಮಾರ್ಗದ ಎತ್ತರ 5253.5 ಮೀಟರ್, ಇದು ಯಾರ್ಬುಂ ಕಣಿವೆಗೆ ಇಳಿಯುತ್ತದೆ. ಅಷ್ಕುಮಾನ್ ತಲೆಯ ಬಳಿ ಗಾಜ಼ಾರ್ ಮತ್ತು ಕೋರ ಬೋರ್ಟ್ ಕಣಿವೆಮಾರ್ಗಗಳಾಗಿವೆ. ಇವೆಲ್ಲ ವರ್ಷದಲ್ಲಿ ಸ್ವಲ್ಪಕಾಲ ಮಾತ್ರ ಸಂಚಾರಕ್ಕೆ ಅರ್ಹ.

ಬುಂಜಿಗೆ ಮೇಲೆ ಸ್ವಲ್ಪ ದೂರದಲ್ಲಿ ಗಿಲ್ಗಿಟ್ ನದಿ ಸಿಂಧೂ ನದಿಯನ್ನು ಸೇರುತ್ತದೆ. ಬುಂಜಿಯ ಕೆಳಗೆ ಅಸ್ತಾರ್ ನದಿ ಆಗ್ನೇಯದಿಂದ ಹರಿದು ಬಂದು ಸಿಂಧುವನ್ನು ಸೇರುತ್ತದೆ. ಗಿಲ್ಗಿಟ್ನಿಂದ ದಕ್ಷಿಣಕ್ಕೆ ಸಾಗುವ ಹೆದ್ದಾರಿ ದಟ್ಟವಾದ ಪೈನ್ ಮರಗಳಿಂದ ಕೂಡಿದೆ. ಈ ಕಣಿವೆಯ ಮೂಲಕ ಹಾದು ಹೋಗುತ್ತದೆ. ಪಾಕಿಸ್ತಾನಕ್ಕೂ ಗಿಲ್ಗಿಟ್ಗೂ ನಡುವಣ ಇನ್ನೊಂದು ಮಾರ್ಗ ಬಾಬುಸಾರ ಕಣಿವೆಯ ಮೂಲಕ ಸಾಗುತ್ತದೆ.

ಗಿಲ್ಗಿಟ್ನ ವ್ಯಾಪಕ ಪ್ರದೇಶದಲ್ಲಿ ಬೇರೆ ಬೇರೆ ಭಾಷೆಗಳನ್ನಾಡುವ ವಿವಿಧ ಜನಾಂಗಗಳಿವೆ. ಈ ಜನರನ್ನೆಲ್ಲ ದಾರ್ದ ಎಂಬ ಹೆಸರಿನಿಂದ ಸಾಮಾನ್ಯವಾಗಿ ಕರೆಯಲಾಗುತ್ತಿದೆ. ಚಿತ್ರಾಲ್ ಮತ್ತು ಸಿಂಧೂ ನಡುವೆ ಇರುವ ದಾರ್ದಿಸ್ತಾನದ ದಾರ್ದರು ಮುಖ್ಯವಾಗಿ ಅಷ್ಕುನ್ ಅಥವಾ ಯೆಷ್ಕುನ್ ಹಾಗೂ ಷಿನ್ ಜನ. ಸತತ ಧಾಳಿಗಳ ಪರಿಣಾಮವಾಗಿ ಅಷ್ಕುನ್ನರೂ ಅನಂತರ ಷಿನ್ನರೂ ಸಿಂಧೂ ಕಣಿವೆಯಿಂದ ಇಲ್ಲಿಗೆ ಬಂದಿರಬೇಕು. ಷಿನ್ ಜನರ ಮೂಲಪುರುಷರು ಹಿಂದೂಗಳು. ಇವರು ಉತ್ತರಪೂರ್ವಗಳಲ್ಲಿ ಬಾಲ್ಟಿಸ್ತಾನದವರೆಗೂ ಪ್ರಸರಿಸಿದ್ದಾರೆ. ಅಲ್ಲಿ ಇವರು ತಾತರ್ ಜನರೊಂದಿಗೆ ಬೆರೆತು ಹೋಗಿದ್ದಾರೆ. ಷಿನ್ನರ ಪ್ರಮುಖ ಭಾಷೆ ಷೀನಾ ಇಲ್ಲಿ ವ್ಯಾಪಕವಾಗಿ ಬಳಕೆಯಲ್ಲಿದೆ. ಇದೊಂದು ಪೈಶಾಚೀಭಾಷೆಯೆಂದು ಹೇಳಲಾಗಿದೆ. ಇರಾನಿಯನ್ ಮತ್ತು ಸಂಸ್ಕೃತಗಳ ನಡುವಣ ಆರ್ಯಭಾಷೆಯ ಆರ್ಷೇಯ ರೂಪವಿದು.

ಉತ್ತರದ ಪರ್ವತ ಜಿಲ್ಲೆಗಳ ಎಲ್ಲ ಜನರೂ ಮೈಕಟ್ಟು ವೇಷಭೂಷಣಗಳಲ್ಲಿ ಸಾಮಾನ್ಯವಾಗಿ ಒಂದೇ ತೆರ. ಇವರು ಗಟ್ಟಿಮುಟ್ಟಾಗಿರುವರಲ್ಲದೆ ಸ್ಪುರದ್ರೂಪಿಗಳು. ಇವರು ಮೊಣಕಾಲನ್ನು ಮುಟ್ಟುವ ದಪ್ಪ ಉಣ್ಣೆ ನಿಲುವಂಗಿಗಳನ್ನೂ ಸಡಿಲ ಪೈಜಾಮುಗಳನ್ನೂ ಕಣಕಾಲುಪಟ್ಟಿ ಮತ್ತು ಬೂಟುಗಳನ್ನೂ ಪದರಪದರವಾಗಿ ತಲೆಗೆ ಸುತ್ತಿದಂತಿರುವ ಫೆಲ್ಟ್ ಟೋಪಿಗಳನ್ನೂ ಸಾಮಾನ್ಯವಾಗಿ ಧರಿಸುತ್ತಾರೆ. ಇವರು ಪೋಲೋ ಆಟಪ್ರಿಯರು, ನೃತ್ಯದಲ್ಲಿ ಆಸಕ್ತರು.

ಅಕ್ಕಿ, ಗೋಧಿ ಮತ್ತಿತರ ಆಹಾರಧಾನ್ಯಗಳೂ ಹಣ್ಣುಗಳೂ ವಿಫುಲವಾಗಿ ಗಿಲ್ಗಿಟ್ನಲ್ಲಿ ಬೆಳೆಯುತ್ತವೆ. ಅಸ್ತಾರ್ನಲ್ಲಿ ಎತ್ತರದ ಬೆಟ್ಟಗುಡ್ಡ ಪ್ರದೇಶದಿಂದಾಗಿ ವ್ಯವಸಾಯ ಕಷ್ಟಕರ, ಉಣ್ಣೆ ನೇಯ್ಗೆ ಪ್ರಮುಖ ಕೈಗಾರಿಕೆ.

ಚರಿತ್ರೆ

ಮೇಲಣ ಸಿಂಧೂನದಿಯ ಪಶ್ಚಿಮದಲ್ಲಿ ಸ್ವಾತ್ ನದಿಯ ತಲೆಯ ಬಳಿಯ ಪ್ರದೇಶದಿಂದಾಚೆಗೆ ಗಾಂಧಾರ ಪ್ರದೇಶದ ಉತ್ತರಕ್ಕೆ ವಾಸಿಸುತ್ತಿದ್ದವರೆಂದು ದಾರ್ದರನ್ನು ಬಲು ಹಿಂದೆಯೇ ಟಾಲೆಮಿ ಗುರುತಿಸಿದ್ದ. ಉತ್ತರದಿಂದ ಸು. 400 ರಲ್ಲಿ ಇಲ್ಲಿಗೆ ಬಂದ ಫಾಹಿಯಾನನೂ 629 ರಲ್ಲಿ ಸ್ವಾತ್ ಮೂಲಕ ಬಂದ ಯುವಾನ್ಚಾಂಗ್ನೂ ಇದರ ಬಗ್ಗೆ ಬರೆದಿದ್ದಾರೆ. ಗಿಲ್ಗಿಟ್ ಪ್ರದೇಶದ ತ್ರಾಕನ್ ಎಂಬ ಮನೆತನಕ್ಕೆ ಸೇರಿದ ದೊರೆಗಳಿಂದ ಆಳಲ್ಪಡುತ್ತಿತ್ತೆಂಬುದು ಹಳೆಯ ಐತಿಹ್ಯ. ಈ ರಾಜಮನೆತನದ ಆಳ್ವಿಕೆ ಕೊನೆಗೊಂಡ ಅನಂತರ ಈ ಪ್ರದೇಶ ನೆರೆಹೊರೆಯ ದೊರೆಗಳ ಸತತ ಧಾಳಿಗೆ ತುತ್ತಾಯಿತು. 1842 ಕ್ಕೆ ಹಿಂದಿನ ಎರಡು ಮೂರು ದಶಕಗಳಲ್ಲಿ ಇದರ ಮೇಲಣ ಒಡೆತನಕ್ಕಾಗಿ ಐದು ಬಾರಿ ರಾಜವಂಶದಲ್ಲೇ ಹೊಡೆದಾಟಗಳಾದವು. 1842 ರ ಸುಮಾರಿನಲ್ಲಿ ಸಿಕ್ಖರು ಇಲ್ಲಿಗೆ ಬಂದು ಇಲ್ಲೊಂದು ಸೇನೆಯನ್ನಿಟ್ಟರು. 1846 ರಲ್ಲಿ ಲಾರ್ಡ್ ಹಾರ್ಡಿಂಜ್ ಜಮ್ಮುವಿನ ಮಹಾರಾಜ ಗುಲಾಬ್ ಸಿಂಗನಿಗೆ ಕಾಶ್ಮೀರವನ್ನು ಒಪ್ಪಿಸಿದಾಗ ಗಿಲ್ಗಿಟ್ ಕೂಡ ಅದರೊಂದಿಗೆ ಅವನ ವಶವಾಯಿತು. ಗುಲಾಬ್ ಸಿಂಗನ ಕಡೆಯ ಡೋಗ್ರ ಜನ 1852 ರಲ್ಲಿ ಇಲ್ಲಿಂದ ಹೊರದೂಡಲ್ಪಟ್ಟರು. ಎಂಟು ವರ್ಷಗಳ ಕಾಲ ಅವರು ಇಲ್ಲಿಗೆ ಪ್ರವೇಶಿಸಿರಲಿಲ್ಲ. ಅವರ ಪೈಕಿ ಎರಡು ಸಾವಿರ ಜನ ಹತರಾದರು. 1860 ರಲ್ಲಿ ಅವರು ಗಿಲ್ಗಿಟ್ಗೆ ಹಿಂದಿರುಗಿದರು. ಅವರು ಗಿಲ್ಗಿಟಿನ ಕೆಲವು ಭಾಗಗಳನ್ನು ಹಿಡಿದುಕೊಂಡರಾದರೂ ಚಿರಕಾಲ ಅವರ ಕೈಯಲ್ಲಿ ಅವು ಉಳಿಯಲಿಲ್ಲ. 1889 ರಲ್ಲಿ ರಷ್ಯ ಮುನ್ನಡೆಯದಂತೆ ತಡೆಯಲು ಬ್ರಿಟಿಷ್ ಸರ್ಕಾರ ಗಿಲ್ಗಿಟ್ ಏಜೆನ್ಸಿಯನ್ನು ಸ್ಥಾಪಿಸಿತು. 1947 ರಲ್ಲಿ ಬ್ರಿಟಿಷರು ಭಾರತಕ್ಕೆ ಸ್ವಾತಂತ್ರ್ಯ ನೀಡಿದಾಗ ಇದರ ಆಡಳಿತದ ಹೊಣೆ ಕಾಶ್ಮೀರದ ರಾಜ್ಯಪಾಲನದಾಯಿತು. 1947 ರ ನವೆಂಬರಿನಲ್ಲಿ ಪಾಕ್ ಆಕ್ರಮಣಕಾರಿ ಪಡೆಗಳು ರಾಜ್ಯಪಾಲನನ್ನು ಸೆರೆಹಿಡಿದು ಗಿಲ್ಗಿಟನ್ನು ವಶಪಡಿಸಿಕೊಂಡವು.

ಗಿಲ್ಗಿಟ್ ಪಟ್ಟಣ

ಇದೊಂದು ಚಿಕ್ಕ ಗಿರಿಧಾಮ. ಗಿಲ್ಗಿಟ್ ಪ್ರದೇಶದ ಆಡಳಿತ ಕೇಂದ್ರ ಸಮುದ್ರಮಟ್ಟದಿಂದ 1715 ಮೀಟರ್ ಎತ್ತರದಲ್ಲಿದೆ ಹಿಂದೂಕುಷ್ನ ಕೋಡುಗಲ್ಲುಗಳ ಕೆಳಗೆ ಇರುವ ಈ ಪಟ್ಟಣ ಆಯಕಟ್ಟಿನ ಸ್ಥಳದಲ್ಲಿದೆ. ಪರ್ವತ ಮಾರ್ಗಗಳು ಸುತ್ತಮುತ್ತಲ ಕಣಿವೆಗಳತ್ತ ಸಾಗುತ್ತವೆ. ಹಿಂದೂಗಳು ಆಳುತ್ತಿದ್ದಾಗ ಇದಕ್ಕೆ ಸಾರ್ಗಿನ್ ಎಂಬ ಹೆಸರಿತ್ತು. ಅನಂತರ ಇದಕ್ಕೆ ಗಿಲಿಟ್ ಎಂಬ ಹೆಸರು ಬಂತು. ಇದೇ ಕ್ರಮೇಣ ಗಿಲ್ಗಿಟ್ ಆಯಿತು. ಇಲ್ಲಿ ಕೆಲವು ಹಳೆಯ ಕಲ್ಲುಕಟ್ಟಡಗಳೂ ಬೌದ್ಧಶಿಲ್ಪಗಳೂ ಉಂಟು. ಇದು ಬಹಳ ಹಿಂದೆ ಒಂದು ಬೌದ್ಧ ಕೇಂದ್ರವಾಗಿತ್ತು. 

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ